ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ಕಲಾ ಬದುಕಿನ ಮರು ಓದು - ``ತೊಳಲಾಟ``

ಲೇಖಕರು :
ನಾ.ಕಾರ೦ತ, ಪೆರಾಜೆ
ಶುಕ್ರವಾರ, ಆಗಸ್ಟ್ 14 , 2015

ಹದಿಮೂರು ನಿಮಿಷದ ಕಿರು ಚಿತ್ರ-'ತೊಳಲಾಟ'. ಯಕ್ಷಗಾನ ಕಲಾವಿದನೊಬ್ಬನ ಕಲಾ ಬದುಕಿನ ಕುತೂಹಲದ ಸುತ್ತ ಸುತ್ತುವ ಝಲಕ್ ಕಥಾವಸ್ತು. ಇಲ್ಲಿ ಕಲಾವಿದ ನಾಯಕ. ಸೂಕ್ಷ್ಮತೆಯ ಬಲೆಯೊಳಗೆ ಚಿತ್ರ ಆತುಕೊಂಡಿದೆ. ಬದುಕನ್ನು ಅಕ್ಷರಕ್ಕಿಳಿಸುವ ಪಣತೊಟ್ಟ ಲೇಖಕ ಮುಖಾಮುಖಿಯಾಗುವ ಮೊದಲ, ನಂತರದ ಮುಜುಗರ ಸ್ಥಿತಿ. ಮನದ ಭಾವಗಳಿಗೆ ಭಾಷೆ ಕೊಡುವ ಮನಃಸ್ಥಿತಿ. ಮೌನದಲ್ಲಿ ಪ್ರತಿಫಲಿಸುವ ಸುಭಗತೆ. ಫಕ್ಕನೆ ಅರ್ಥವಾಗದ ಸೂಕ್ಷ್ಮ ಸಂವೇದನೆ. ಒಂದೆರಡು ಬಾರಿ ವೀಕ್ಷಿಸಿದರೂ ತಕ್ಷಣ ಗ್ರಹಿಕೆಗೆ ನಿಲುಕದ ಒಳನೋಟ. ವೀಕ್ಷಕನಿಗೂ ತೊಳಲಾಟ! ಕಿರುಚಿತ್ರಗಳ ಹಂದರವೇ ಹೀಗೆ.

ವಿಭಿನ್ನ ಪಾತ್ರಗಳಲ್ಲಿ ಶೇಣಿ ವೇಣುಗೋಪಾಲ್ (ವೀಜಿ) ಮತ್ತು ಗೋವಿಂದ ಭಟ್ ಸೂರಿಕುಮೇರು
ಮೇರು ಕಲಾವಿದ ಸೂರಿಕುಮೇರು ಗೋವಿಂದ ಭಟ್ಟರು ಚಿತ್ರದ ಮುಖ್ಯ ಕಲಾವಿದ. ಸುಬ್ರಾಯ ಭಟ್ಟರ ಪಾತ್ರದ ಮೂಲಕ ತನ್ನ ಕಲಾ ಜೀವನಕ್ಕೆ ಕನ್ನಡಿ ಹಿಡಿದಿದ್ದಾರೆ. ಶೇಣಿ ವೇಣುಗೋಪಾಲ್ ಕಾಸರಗೋಡು (ವೀಜಿ) ಇವರಿಗೆ ಅಧ್ಯಾಪಕನ ಪಾತ್ರ. ಸುಬ್ರಾಯ ಭಟ್ಟರ ಅನುಭವಕ್ಕೆ ಅಕ್ಷರ ರೂಪ ಕೊಡುವ ಲೇಖಕ. ಇಬ್ಬರದೂ ಉತ್ತಮ ಅವಕಾಶ.

ವೀಜಿ ಹಲವು ವರುಷಗಳಿಂದ ಕಿರುಚಿತ್ರಗಳ ಅಧ್ಯಯನದ ಕುತೂಹಲಿ. 'ಕಬ್ಬಿನ ಹಾಲು, ಕಾವಳ' ಕಿರುಚಿತ್ರಗಳಲ್ಲಿ ಅಭಿನಯಿಸಿದ ಅನುಭವ. ಕಬ್ಬಿನ ಹಾಲು ಚಿತ್ರಕ್ಕೆ 'ವಿಭಾ ಪ್ರಶಸ್ತಿ'ಯೂ ಬಂದಿತ್ತು. ಕಿರು ಚಿತ್ರಗಳ ಅನ್ವೇಷಕ ವೀಜಿ ಮತ್ತು ಸಹೋದರ ಶೇಣಿ ಮುರಳಿ 'ತೊಳಲಾಟ'ವನ್ನು ಸಿದ್ಧಪಡಿಸಿದ್ದಾರೆ. ಕೀರ್ತಿಶೇಷ ಡಾ.ಶೇಣಿ ಗೋಪಾಲಕೃಷ್ಣ ಭಟ್ಟರ ಮೊಮ್ಮಕ್ಕಳಿವರು.

ಸುಬ್ರಾಯ ಭಟ್ಟರ ಪಾತ್ರದಲ್ಲಿ ಸೂರಿಕುಮೇರು ಗೋವಿಂದ ಭಟ್ಟರು

ಯಕ್ಷಗಾನ ರಂಗದಲ್ಲಿ ಬಣ್ಣ ಹಚ್ಚಿದ ಎಪ್ಪತ್ತು ದಾಟಿದ ಗೋವಿಂದ ಭಟ್ಟರಿಗೆ ಕ್ಯಾಮೆರಾ ಎದುರಿಸುವುದು ಹೊಸತು. ಪಂಥಾಹ್ವಾನವೂ ಕೂಡಾ. "ಅಭಿನಯಿಸಬೇಕೆಂದು ಮನವಿ ಮಾಡಿದಾಗ ಮುಜುಗರದಿಂದ ಅಸಾಧ್ಯವೆಂದು ಹಿಂದೆ ಸರಿದಿದ್ದರು. ಒತ್ತಾಯದಿಂದ ಮನವೊಲಿಸಿದೆವು. ನೋಡೋಣ, ರಿಹರ್ಸಲ್ ಬೇಕೆಂದರು. ಕೊನೆಗೆ ಯಾವುದೇ ರಿಹರ್ಸಲ್ ಇಲ್ಲದೆ ಸಿಂಗಲ್ ಟೇಕ್ನಲ್ಲಿ ಗೋವಿಂದ ಭಟ್ಟರು ಉತ್ತಮವಾಗಿ ಅಭಿನಯಿಸಿದರು," ಎಂಬ ಅನುಭವ ಹಂಚಿಕೊಳ್ಳುತ್ತಾರೆ ಚಿತ್ರದ ನಿರ್ದೇಶಕ ಶೇಣಿ ಮುರಳಿ.

ಕಾಸರಗೋಡು ಮಧೂರಿನ ಉಳಿಯ ಮನೆ, ಕಡಲ ಕಿನಾರೆ, ನೀರ್ಚಾಲು ಶಾಲೆ..ಗಳಲ್ಲಿ ಹತ್ತು ದಿವಸಗಳ ಚಿತ್ರೀಕರಣ. ಗೋವಿಂದ ಭಟ್ಟರು ರಚಿಸಿದ ಸಾಹಿತ್ಯಕ್ಕೆ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ಸಂಗೀತ ಸಂಯೋಜಿಸಿದ್ದಾರೆ, ಹಾಡಿದ್ದಾರೆ. ಬದುಕಿನ ಎಷ್ಟೋ ಸಂಗತಿಗಳು ಹಾಡು ಮತ್ತು ಅಭಿನಯದೊಂದಿಗೆ ಮಿಳಿತವಾಗಿವೆ. ಹತ್ತಾರು ಬಾರಿ ಪ್ರಾಕ್ಟೀಸ್ ಮಾಡಿದಂತೆ ಭಾಸವಾಗುತ್ತದೆ.

ತಾನು ಸಾಗಿ ಬಂದ ಹಾದಿಯನ್ನು ಗೊವಿಂದ ಭಟ್ಟರು ಪರಿಣಾಮಕಾರಿಯಾಗಿ ಸುಬ್ರಾಯ ಭಟ್ಟರ ಮೂಲಕ ಬಿಂಬಿಸಿದ್ದಾರೆ. ತನಗೆ ತಾರಾಮೌಲ್ಯ ತಂದುಕೊಟ್ಟ ಯಕ್ಷಗಾನದ 'ಕೌರವ'ವನನ್ನು ಎಣಿಸುವಾಗ ಉಂಟಾಗುವ ಭಾವತೀವ್ರತೆಯ ಅಭಿವ್ಯಕ್ತಿ ಅನನ್ಯ. ಉದಾ: ಕಿರೀಟವನ್ನು ನೋಡುತ್ತಿದ್ದಂತೆ ಉಂಟಾಗುವ ಗತ ವೈಭವದ ಮೆಲುಕು, ಬೀರುವ ನೋಟ ಮತ್ತು ಆ ಪಾತ್ರವು ತನ್ನೊಳಗೇ ಪಾತ್ರವಾಗುವ ಪರಾಕಾಯ ಸ್ಥಿತಿ.

'ಶೇಣಿ ರಂಗ ಜಂಗಮ ಟ್ರಸ್ಟ್' ತೊಳಲಾಟವನ್ನು ನಿರ್ಮಿಸಿದೆ. ಸನ್ ಟಿವಿ ವಾಹಿನಿಯಲ್ಲಿ ಪಳಗಿದ ಮಹೇಶಕೃಷ್ಣ ತೇಜಸ್ವಿಯವರ ಕ್ಯಾಮರಾ ತಂತ್ರವು ಚಿತ್ರವನ್ನು ಗೆಲ್ಲಿಸಿದೆ. "ಇದಕ್ಕಿಂತ ಉತ್ತಮ ಚಿತ್ರಗಳು ಬಂದಿರಬಹುದು. ನಮ್ಮ ಆರ್ಥಿಕ ಮಿತಿ ಮತ್ತು ಅನುಭವದಲ್ಲಿದು ಚಿಕ್ಕ ಹೆಜ್ಜೆ. ಯಲ್ಲಿ ಸಿದ್ಧಪಡಿಸಿದ್ದೇವೆ. ಇದೊಂದು ಚಿಕ್ಕ ಹೆಜ್ಜೆ. ಸುಧಾರಣೆಗಳು ಸಾಕಷ್ಟು ಅಗಬೇಕಾಗಿದೆ," ಎನ್ನುತ್ತಾರೆ ಮುರಳಿ. ಚಿತ್ರ ವೀಕ್ಷಿಸಿದ ಅನೇಕರು ಮೆಚ್ಚಿದ್ದಾರೆ, ಹಿಮ್ಮಾಹಿತಿ ನೀಡಿದ್ದಾರೆ. ಸಂಪಾಜೆಯ ಡಾ.ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನವು ಆರ್ಥಿಕ ಹೊರೆಯನ್ನು ತುಂಬಾ ಹಗುರ ಮಾಡಿದ್ದಾರೆ. ಹಾಗಾಗಿ ಚಿತ್ರದ ಸಿಡಿಯನ್ನು ತೀರಾ ಕಡಿಮೆ ಬೆಲೆಗೆ ನೀಡಲು ಟ್ರಸ್ಟಿಗೆ ಸಾಧ್ಯವಾಯಿತು. ಬೆಲೆ ನಿಗದಿ ಮಾಡಿದರೂ ಸಿಂಹಪಾಲು ಉಚಿತವಾಗಿಯೇ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಮಾರಾಟಕ್ಕಿಲ್ಲ. ಯೂಟ್ಯೂಬ್ ಜಾಲತಾಣದಲ್ಲಿ ಲಭ್ಯ.

"ಕಲಾವಿದ ಕುಟುಂಬವೊಂದು ಚಿತ್ರ ನಿರ್ಮಾಣದ ದಾಖಲೀಕರಣ ಮಾಡಿದುದು ಶ್ಲಾಘ್ಯ. ಬಾಹುಬಲಿಯಂತಹ ಕೋಟಿ ಲೆಕ್ಕದ ಚಿತ್ರಗಳ ಅಬ್ಬರದ ಮಧ್ಯೆ ಇಂತಹ ಸಣ್ಣ ಧ್ವನಿಗಳು ಹಬ್ಬಬೇಕು. ಚಿತ್ರ ಹದಿಮೂರು ನಿಮಿಷಗಳ ಬದಲು ಇಪ್ಪತ್ತೋ ಮೂವತ್ತು ನಿಮಿಷ ಇರಬೇಕಿತ್ತು," ಎನ್ನುವ ಆಶಯ ವ್ಯಕ್ತಪಡಿಸುತ್ತಾರೆ - ಹಿರಿಯ ವಿದ್ವಾಂಸ, ವಿಮರ್ಶಕ ಡಾ.ಎಂ.ಪ್ರಭಾಕರ ಜೋಶಿ. ಯಕ್ಷಗಾನ ಹಿನ್ನೆಲೆಯ ಸಿನೆಮಾಗಳು ಬಂದಿದೆ. ಕಿರುಚಿತ್ರ ಬಹುಶಃ ಇದು ಮೊದಲು. 'ತೊಳಲಾಟ' - ಗೋವಿಂದ ಭಟ್ಟರ ಕಲಾ ಸಾಧನೆಗೊಂದು ಕಿರೀಟ.

ಇನ್ನಷ್ಟು ವೃತ್ತಿಪರವಾಗಿ ಮಾಡಬಹುದೆಂಬ ಕಾಳಜಿ ತಂಡಕ್ಕಿದೆ. ಹೆಚ್ಚು ಶ್ರಮ ಮತ್ತು ಆರ್ಥಿಕ ವ್ಯವಸ್ಥೆ ಬೇಡುವ ಚಿತ್ರದ ತಯಾರಿ ದುಬಾರಿ. ಆಧುನಿಕ ತಂತ್ರಜ್ಞಾನಗಳ ಬೀಸುಹೆಜ್ಜೆಯ ಕಾಲಘಟ್ಟದಲ್ಲಿ ಇಂತಹ ಚಿತ್ರಗಳು, ದಾಖಲೀಕರಣಗಳು ಅಗತ್ಯ. ಭವಿಷ್ಯಕ್ಕೊಂದು ಆಕರ. ಅನ್ವೇಷಕ ಪ್ರವೃತ್ತಿಯ ಡಾ.ಶೇಣಿಯವರು ಬದುಕಿರುತ್ತಿದ್ದರೆ ಚಿತ್ರದಲ್ಲಿ ಬಣ್ಣ ಹಚ್ಚುತ್ತಿದ್ದರು! ಚಿತ್ರದ ನಿರ್ದೇಶಕರಿಗೆ ಒಂದು ಒಳ್ಳೆಯ ಮಾತು ಹೇಳೋಣ. ಆಗದೇ?


*********************

’ತೊಳಲಾಟ’ ಕಿರುಚಿತ್ರದ ಬಗ್ಗೆ ಡಾ.ಪ್ರಭಾಕರ ಜೋಶಿಯವರಿ೦ದ ಮೆಚ್ಚುಗೆ



ಕೃಪೆ : yakshamatu.blogspot


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
(11/17/2015)
ಯೂಟ್ಯೂಬ್ ಜಾಲತಾಣದ ತೊಳಲಾಟದ ಕೊಂಡಿಯನ್ನು ಕೊಡಿ. PLEASE
S(8/15/2015)
ಯೂಟ್ಯೂಬ್ ಜಾಲತಾಣದ ತೊಳಲಾಟದ ಕೊಂಡಿಯನ್ನು ಕೊಡಿ.




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ